ಅಹಮದಾಬಾದ್
ಗುಜರಾತಿನ ರಾಜಧಾನಿ. ಸಬರ್ಮತಿ ನದಿಯ ಎಡದಂಡೆಯಲ್ಲಿದೆ. ಜನಸಂಖ್ಯೆ 1,149,918 (1961). ಹಿಂದೂ ಅರಸರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು 1411ರಲ್ಲಿ ಗುಜರಾತಿನ ಸುಲ್ತಾನ್ ಅಹಮ್ಮದ್ ಷಾ ತನ್ನ ರಾಜಧಾನಿಯಾಗಿ ಮಾಡಿಕೊಂಡಮೇಲೆ ಬಹಳ ಪ್ರಸಿದ್ಧವಾಯಿತು. 15ನೆಯ ಶತಮಾನದ ಆರಂಭದಲ್ಲಿ ಈತ ಅನೇಕ ಕಟ್ಟಡಗಳನ್ನು ಕಟ್ಟಿಸಿದ. 

ಇವುಗಳಲ್ಲಿ ಕೋಟೆಯ ಒಳಗಿರುವ ಮಸೀದಿ, ಸಯೀದ್ ಅಲಮ್‍ನ ಗೋರಿ, ಹೈಬತ್‍ಖಾನನ ಗೋರಿ ಮತ್ತು ಜಾಮಿಮಸೀದಿ ಮುಖ್ಯವಾದವು. ಇಲ್ಲಿನ ಮೊದಲ ಕಟ್ಟಡಗಳ ಶೈಲಿಯಲ್ಲಿ ದೆಹಲಿಯ ಫಿರೋಜ್ ಷಾ ತುಘಲಕ್‍ನ ಕಾಲದ ವಾಸ್ತುಶೈಲಿಯ ಪ್ರಭಾವ ಬಹಳವಾಗಿದೆ. ವಿಶಾಲವಾದ ಪ್ರಾಂಗಣದ ಮಧ್ಯೆ ಅನೇಕ ಕಂಬಗಳು, ಕಮಾನುಗಳು ಮತ್ತು ಗುಮ್ಮಟಗಳನ್ನೊಳಗೊಂಡಿರುವ ಜಾಮೀಮಸೀದಿ (1423) ಗುಜರಾತ್ ಪ್ರಾಂತೀಯ ಶೈಲಿಗೇ ಮುಕುಟಪ್ರಾಯವಾದ ಕೃತಿಯೆಂದು ಪ್ರಸಿದ್ಧವಾಗಿದೆ. ಇದರ ಬಳಿಯೇ ಇರುವ ತೀನ್‍ದರ್ವಾಜಾ ಸಹ ಒಂದು ಉತ್ತಮ ಕಟ್ಟಡ. ಅಹಮದ್ ಷಾನ ಅನಂತರ ಆಳಿದ ಮಹಮದ್ ಷಾನ (1442-51) ಕಾಲದಲ್ಲಿ ಕಟ್ಟಿರುವ ಅಹಮದ್ ಷಾನ ಗೋರಿ, ರಾಣಿ-ಕಾ-ಹುಜ್ರಾ ಎಂಬ ರಾಣಿಯರ ಗೋರಿಗಳು ಸಹಾ ಇದೇ ವಾಸ್ತುಸಂಪ್ರದಾಯದಲ್ಲಿಯೇ ಇವೆ. ಇದೇ ಶೈಲಿಯ ಇಲ್ಲಿನ ಕುತ್ಬುದ್ದೀನನ ಮಸೀದಿ ಸುಲ್ತಾನ್ ಕುತ್ಬುದ್ದೀನ್‍ನ (1451-58) ಕಾಲಕ್ಕೆ ಸೇರಿದುದು. 1459ರಿಂದ ಸುಮಾರು 1550ರ ವರೆಗೆ ಇಲ್ಲಿ ಆಳಿದ ಬೇಗರ್ಹಾ ಅರಸರ ಕಾಲದಲ್ಲಿ ಇಲ್ಲಿ ಇನ್ನೂ ಪ್ರಬುದ್ಧವಾದ ಪ್ರಾಂತೀಯ ಶೈಲಿಯಲ್ಲಿ ಅನೇಕ ಕಟ್ಟಡಗಳು ಕಟ್ಟಲ್ಪಟ್ಟವು. ಇವುಗಳಲ್ಲಿ ಸಬರ್ಮತಿಯ ಆಚೆಯ ದಡದಲ್ಲಿ ಉಸ್ಮಾನ್‍ಪುರದಲ್ಲಿರುವ ಸಯಿದ್ ಉಸ್ಮಾನ್ ಗೋರಿ (1460), ಮಿಯಾನ್‍ಶಾನ್ ಬೆಷ್ಟಿಯ ಗೋರಿ (1456), ಬೀಬಿ ಅಚುತ್ ಕುಕಿಯ ಗೋರಿ (1472), ಮತ್ತು ಷಾ ಆಲಮ್‍ನ ಗೋರಿ (1475) ಮುಖ್ಯವಾದವು. ಹದಿನಾರನೆಯ ಶತಮಾನದ ಆರಂಭದಲ್ಲಿ ಕಟ್ಟಲಾದ ರಾಣಿ ಸೆಪರಿಯ ಗೋರಿ ಬಹು ನಾಜೂಕಿನ ಕಟ್ಟಡವಾಗಿದ್ದು, ದೊಡ್ಡ ಕಂಬಗಳು ಮತ್ತು ಕಮಾನುಗಳನ್ನು ಒಳಗೊಂಡ ಹಳೆಯ ಮುಸ್ಲಿಂ ವಾಸ್ತುಶೈಲಿಯ ಗಡಸು ಇಲ್ಲಿ ಕಾಣುವುದಿಲ್ಲ. ಇದೇ ರೀತಿಯಲ್ಲಿ ಇರುವ ಇನ್ನೊಂದು ಸೌಮ್ಯಶೈಲಿಯ ಕಟ್ಟಡ ಸೀದಿ ಸಯಿದ್‍ನ ಮಸೀದಿ (ಸು. 1510-15). ಇಲ್ಲಿರುವ ಸುಂದರವಾದ ಬಳ್ಳಿಗಳನ್ನು ಬಿಡಿಸಿರುವ ಕಲ್ಲಿನ ಜಾಲಾಂದ್ರಗಳು ಲೋಕಪ್ರಸಿದ್ಧವಾಗಿವೆ. ರಾಣಿ ರೂಪವತಿಯ ತಾಜಾ (ಸು. 1515), ಇಸಾನ್‍ಪುರ್ ರೌಜಾ (ಸು. 1530), ಮತ್ತು ಷಾ ಆಲಮ್‍ನ ಗೋರಿಯ ಬಳಿ ಇರುವ ಮಸೀದಿ (ಸು. 1550) ಈ ಕಾಲದ ಇತರ ಮುಖ್ಯ ಕಟ್ಟಡಗಳು. ಇವಲ್ಲದೆ ಸಯ್ಯದ್ ಯಾಕೂತ್‍ನ ಮಸೀದಿ, ಮಿಯಾನ್‍ಶಾನ್ ಬೆಷ್ಟಿಯ ಮಸೀದಿ, ಓಜಾ ಬಿಜಿಯ ಗೋರಿ ಗುಮ್ಮಟ ಮಸೀದಿ ಮುಂತಾದ ಇನ್ನೂ ಅನೇಕ ಪ್ರಾಚೀನ ಸ್ಮಾರಕಗಳನ್ನುಳ್ಳ ಅಹಮದಾಬಾದ್ ಗುಜರಾತ್ ಪ್ರಾಂತ್ಯದ ಮುಸ್ಲಿಂ ವಾಸ್ತುಶೈಲಿಯ ಕೇಂದ್ರ. ಇಲ್ಲಿಯ ಕಟ್ಟಡಗಳು ಹಿಂದೂವಾಸ್ತುಶೈಲಿಯ ಹಲವು ಅಂಶಗಳನ್ನು ಇಸ್ಲಾಮೀ ಕಟ್ಟಡಗಳಿಗೆ ಸೊಗಸಾಗಿ ಹೊಂದಿಸಿಕೊಳ್ಳುವ ವೈಶಿಷ್ಟ್ಯವನ್ನು ಚೆನ್ನಾಗಿ ಪ್ರತಿಬಿಂಬಿಸುತ್ತವೆ.

ಈಗಿನ ಅಹಮದಾಬಾದಿನಲ್ಲಿ ಗುಜರಾತ್ ವಿಶ್ವವಿದ್ಯಾನಿಲಯವೂ ಅದಕ್ಕೆ ಸೇರಿದ 43 ಕಾಲೇಜುಗಳಲ್ಲಿ 23 ಕಾಲೇಜುಗಳೂ ಇಲ್ಲಿ ಇವೆ. ನದಿಯ ಪಶ್ಚಿಮ ದಡದ ಮೇಲಿರುವ ಸಬರ್ಮತಿ ಬಡಾವಣೆ ಮಹಾತ್ಮ ಗಾಂಧಿಯವರ ಆಶ್ರಮವಿದ್ದ ಪ್ರಸಿದ್ಧ ಸ್ಥಳ.

(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ